ಚೇಂಬರ್ಸ್, ವಿಲಿಯಂ 2

1800-1883. ಸ್ಕಾಟ್ಲೆಂಡಿನ ಬರೆಹಗಾರ ಮತ್ತು ಪ್ರಕಾಶಕ. ಆರಂಭದಲ್ಲಿ ಎಡಿನ್‍ಬರೊ ಪುಸ್ತಕ ವ್ಯಾಪಾರಿಗಳೊಬ್ಬರಲ್ಲಿ ಉದ್ಯೋಗಾರ್ಥಿಯಾಗಿದ್ದ. ಐದು ವರ್ಷಗಳ ಆನಂತರ ತಾನೇ ಸ್ವಂತವಾಗಿ ಪುಸ್ತಕ ವ್ಯಾಪಾರವನ್ನು ಆರಂಭಿಸಿದ. ಆನಂತರ ತನ್ನ ವ್ಯಾಪಾರವನ್ನು ದ್ವಿಗುಣಗೊಳಿಸಲು ಪ್ರಕಾಶಕನಾದ. 1825-30ರ ಅವಧಿಯಲ್ಲಿ ಈತನ ಬುಕ್ ಆಫ್ ಸ್ಕಾಟ್ಲೆಂಡ್ ಕೃತಿ ರಚನೆಯಾಯಿತು. ಇದರ ಜೊತೆಯಲ್ಲಿ ತನ್ನ ಕಿರಿಯ ಸಹೋದರ ರಾಬರ್ಟ್ ಚೇಂಬರ್ಸ್‍ನನ್ನು ಸೇರಿಸಿಕೊಂಡು ಸ್ಕಾಟ್ಲೆಂಡಿನ ಗೆಜೆಟಿಯರನ್ನು ಸಂಪಾದಿಸಿದ. 1832ರಲ್ಲಿ ಚೇಂಬರ್ಸ್ ಜರ್ನಲನ್ನು ಸ್ಥಾಪಿಸಿ ಸ್ಕಾಟ್ಲೆಂಡಿನಲ್ಲೇ ಸುಲಭದರದಲ್ಲಿ ಸಾಹಿತ್ಯವನ್ನು ಒದಗಿಸುವಲ್ಲಿ ಮೊದಲಿಗನಾದ. ಅಷ್ಟಕ್ಕೆ ತೃಪ್ತನಾಗದೆ ಜಗತ್ತಿನ ಜ್ಞಾನದಾಹವನ್ನು ಅಡಗಿಸಲು ಯೋಜನೆಯೊಂದನ್ನು ಹಾಕತೊಡಗಿದ. ಅದೇ ವರ್ಷ ತನ್ನ ಸಹೋದರ ರಾಬರ್ಟನನ್ನು ಜೊತೆಗೂಡಿಸಿಕೊಂಡು ವಿಲಿಯಂ ಮತ್ತು ರಾಬರ್ಟ್ ಚೇಂಬರ್ಸ್ ಸಂಸ್ಥೆಯನ್ನು ಸ್ಥಾಪಿಸಿದ. ಅಲ್ಲಿ ಬರೆವಣಿಗೆ, ಸಂಪಾದನ ಕಾರ್ಯ, ಮುದ್ರಣ ಹಾಗೂ ಪ್ರಕಾಶನ ಕಾರ್ಯಗಳಿಗೆ ಆದ್ಯತೆ ನೀಡಿದ. ತತ್ಪಲವಾಗಿ ಇನ್‍ಫರ್ಮೇಷನ್ ಫಾರ್ ದಿ ಪೀಪಲ್ (2 ಸಂಪುಟ), ಚೇಂಬರ್ಸ್ ಮಿಸೆಲೆನಿ (20 ಸಂಪುಟ) ಮತ್ತು ಚೇಂಬರ್ಸ್ ಎನ್‍ಸೈಕ್ಲೋಪಿಡಿಯದ ಹತ್ತು ಸಂಪುಟಗಳನ್ನು ಹೊರತಂದ. ಈ ವಿಶ್ವಕೋಶ ಈವರೆಗೂ ಅನೇಕ ಪರಿಷ್ಕøತ ಆವೃತ್ತಿಗಳನ್ನು ಪಡೆದಿದೆ. ಅಲ್ಲದೆ ಈತ ಎಡಿನ್‍ಬರೋದ ಸಾರ್ವಜನಿಕ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ. ಎರಡು ಬಾರಿ ಲಾರ್ಡ್ ಪ್ರೊವೊಸ್ಟನಾಗಿ ಚುನಾಯಿತನಾದ ತನ್ನ ಸ್ವಂತ ಖರ್ಚಿನಲ್ಲಿ ಸೇಂಟ್ ಗಿಲ್ಸ್ ಕೆತಡ್ರಲ್‍ನ ಜೀರ್ಣೋದ್ಧಾರ ಮಾಡಿದ. ತನ್ನ ಹುಟ್ಟೂರಾದ ಪೀಬರ್ಸ್ ಕೌಂಟಿಯಲ್ಲಿ ಸಮಾಜಾಭಿವೃದ್ಧಿ ಸಂಸ್ಥೆಯೊಂದನ್ನು ಸ್ಥಾಪಿಸಿದ.					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ